ಕ್ರಿಮಿನಲ್ ಹಿನ್ನೆಲೆ ಉಳ್ಳ ಸಮಾಜಘಾತಕ ಕೃತ್ಯಗಳಲ್ಲಿ ಭಾಗಿಯಾಗುವ ವ್ಯಕ್ತಿಗಳೊಂದಿಗೆ ನಿಕಟ ಸಂಪರ್ಕ ಇಟ್ಟುಕೊಳ್ಳುವ ಪೊಲೀಸ್ ಇಲಾಖೆಯ ಅಧಿಕಾರಿಗಳಿಗೆ ಪೊಲೀಸ್ ಆಯುಕ್ತರು ಖಡಕ್ ಆದೇಶ ನೀಡಿದ್ದಾರೆ.
ಪಿಎಸ್‌ಐ ನಾಗರಾಜ್ ಅವರು ಕ್ರಿಮಿನಲ್ ಹಿನ್ನೆಲೆಯುಳ್ಳ ‘ದಾಸ’ ಎಂಬ ವ್ಯಕ್ತಿಯ ಮನೆಯಲ್ಲಿ ನಡೆದ ಹುಟ್ಟುಹಬ್ಬದ ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡಿದ್ದು ದೊಡ್ಡಮಟ್ಟದಲ್ಲಿ ವೈರಲ್ ಆಗಿತ್ತು .
ಈ ದಾಸ ಎಂಬ ವ್ಯಕ್ತಿಯ ಮೇಲೆ ರಾಜಾನುಕುಂಟೆ, ಚಿಕ್ಕಜಾಲ ಮತ್ತು ಯಲಹಂಕ ನ್ಯೂಟೌನ್ ಸೇರಿದಂತೆ ಹಲವು ಪೊಲೀಸ್ ಠಾಣೆಗಳಲ್ಲಿ ಭೂಹಗರಣ ಹಲ್ಲೆ ಮತ್ತು ಜೀವ ಬೆದರಿಕೆಯಂತಹ ಗಂಭೀರ ಪ್ರಕರಣಗಳು ದಾಖಲಾಗಿದ್ದು ಈತ ಪೊಲೀಸ್ ಇಲಾಖೆಗೆ ಮೋಸ್ಟ್ ವಾಂಟೆಡ್ ವ್ಯಕ್ತಿಯಾಗಿದ್ದ .
ಈತನ ಜೊತೆಯಲ್ಲಿ ನಿಕಟ ಸಂಪರ್ಕ ಹೊಂದಿದ್ದ ಪಿಎಸ್ಐ ನಾಗರಾಜ್ ಈತನ ಹುಟ್ಟಿದ ಹಬ್ಬದ ಸಂಭ್ರಮದಲ್ಲಿ ಪಾಲ್ಗೊಂಡು ಕೇಕ್ ಕತ್ತರಿಸಿ ಸಂಭ್ರಮ ಹಂಚಿಕೊಂಡಿದ್ದರು. ವಿಚಾರ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ, ನಗರ ಪೊಲೀಸ್ ಆಯುಕ್ತರಾದ ಸೀಮಾಂತ್ ಕುಮಾರ್ ಸಿಂಗ್ ಅವರು ತನಿಖೆ ನಡೆಸಿ ವರದಿ ನೀಡುವಂತೆ ಸೂಚಿಸಿದ್ದರು. ತನಿಖಾ ವರದಿಯಲ್ಲಿ ಪಿಎಸ್‌ಐ ನಾಗರಾಜ್ ಅವರು ಭೂಮಾಫಿಯಾ ಮತ್ತು ರೌಡಿ ಚಟುವಟಿಕೆಗಳಲ್ಲಿ ತೊಡಗಿರುವವರೊಂದಿಗೆ ಅನಗತ್ಯ ಸ್ನೇಹ ಮತ್ತು ಸಂಪರ್ಕ ಹೊಂದಿರುವುದು ದೃಢಪಟ್ಟಿದ್ದು. ಪೂರ್ವ ವಲಯದ ಜಂಟಿ ಪೊಲೀಸ್ ಆಯುಕ್ತ ರಮೇಶ್ ಬಾನೋತ್ ಅವರು ಅಮಾನತು ಆದೇಶ ಹೊರಡಿಸಿದ್ದಾರೆ.
ಈ ಮೂಲಕ ಬೆಂಗಳೂರು ಪೊಲೀಸ್ ಆಯುಕ್ತರು ಇಲಾಖೆಯ ಎಲ್ಲಾ ಅಧಿಕಾರಿಗಳಿಗೆ ಸ್ಪಷ್ಟ ಸಂದೇಶ ರವಾನಿಸಿದ್ದಾರೆ. ಇನ್ಮುಂದೆ ಯಾವುದೇ ಪೊಲೀಸ್ ಅಧಿಕಾರಿ ಸಮಾಜ ಘಾತುಕ ಶಕ್ತಿಗಳೊಂದಿಗೆ ಸ್ನೇಹ, ಪಾರ್ಟಿ ಅಥವಾ ವ್ಯವಹಾರ ಸಂಬಂಧ ಇಟ್ಟುಕೊಂಡರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.